ಡುಬಾಯಿ, ಅಬ್ಬೆ
1770-. ಮತಪ್ರಚಾರಕ್ಕೆಂದು ಭಾರತಕ್ಕೆ ಬಂದ ಪಾಶ್ಚಾತ್ಯರಲ್ಲಿ ಪ್ರಮುಖ. ಹುಟ್ಟಿದ್ದು ಫ್ರಾನ್ಸ್‍ನಲ್ಲಿ. 1792ರಲ್ಲಿ ಈತ ಭಾರತಕ್ಕೆ ಬಂದು ಪುದುಚೇರಿಯ ಕ್ರೈಸ್ತಧರ್ಮಪ್ರಸಾರ ಕೇಂದ್ರದಲ್ಲಿ ಪಾದ್ರಿಯಾಗಿ ಸೇರಿದ. ಈತ ಸಂಸ್ಕøತವನ್ನಲ್ಲದೆ ದಕ್ಷಿಣ ಭಾರತದ ಹಲವು ಭಾಷೆಗಳನ್ನು ಬಲ್ಲವನಾಗಿದ್ದ. ಮೂವತ್ತೊಂದು ವರ್ಷಗಳ ಕಾಲ ದಕ್ಷಿಣ ಭಾರತದ ಹಲವು ಸ್ಥಳಗಳಲ್ಲಿ ಸಂಚರಿಸಿದ ಜನಜೀವನದ ವಿವಿಧ ಮುಖಗಳನ್ನು ಅಧ್ಯಯನ ಮಾಡಿದ. ಶ್ರೀರಂಗಪಟ್ಟಣದ ಪತನದ ಅನಂತರ ಟೀಪೂಸುಲ್ತಾನನ ಕಾಲದಲ್ಲಿ ಬಲವಂತಕ್ಕಾಗಿ ಮುಸ್ಲಿಮರಾದವರನ್ನು ಮತ್ತೆ ಕ್ರೈಸ್ತಮತಕ್ಕೆ ಪರಿವರ್ತಿಸಿ, ಮೊಟ್ಟಮೊದಲಿಗೆ ಮೈಸೂರಿನಲ್ಲಿ ಒಂದು ಕ್ಯಾತೊಲಿಕ್ ಚರ್ಚನ್ನು ಸ್ಥಾಪಿಸಿದ. ಹಾಸನ ಜಿಲ್ಲೆಯ ಸಾತೇನಹಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ತನ್ನ ಸಮಾಜ ಸುಧಾರಣಾಕಾರ್ಯವನ್ನು ಆರಂಭಿಸಿದ. ಇವನ ಉದಾರಗುಣಗಳನ್ನು ಕಂಡ ಜನ ಈತನನ್ನು ದೊಡ್ಡ ಸ್ವಾಮಿ ಎಂದು ಕರೆಯುತ್ತಿದ್ದರು. ತಾನು ಕಣ್ಣಾರೆ ಕಂಡದ್ದನ್ನು ಮತ್ತು ಹಿಂದೂ ಧಾರ್ಮಿಕ ಗ್ರಂಥಗಳಿಂದ ಓದಿ ತಿಳಿದಿದ್ದನ್ನು ಹಿಂದೂ ಮ್ಯಾನರ್ಸ್, ಕಸ್ಟಮ್ಸ್ ಅಂಡ್ ಸೆರಿಮನೀಸ್ ಎಂಬ ಗ್ರಂಥದಲ್ಲಿ ಈತ ಬರೆದಿದ್ದಾನೆ. ಇದರಲ್ಲಿ ಮುಖ್ಯವಾಗಿ ದಕ್ಷಿಣ ಭಾರತಕ್ಕೆ ಸಂಬಂಧಿಸಿದ ಹಬ್ಬಹರಿದಿನಗಳು, ನಂಬಿಕೆಗಳು, ಜಾತಿಪದ್ದತಿ, ಕಥೆಗಳು, ಅಲ್ಲದೆ ಸಮಾಜದಲ್ಲಿ ಪ್ರಚಲಿತವಿದ್ದ ಸಹಗಮನ, ಪ್ರಾಣಿಬಲಿ ಮುಂತಾದವನ್ನು ವಿವರಿಸಿದ್ದಾನೆ. ಈ ಗ್ರಂಥದಲ್ಲಿ ಆಸ್ತಿ ವಿಭಜನೆ, ದತ್ತು ತೆಗೆದುಕೊಳ್ಳುವ ಪದ್ಧತಿ, ಹಿಂದೂ ಕಥೆಗಳು ಮತ್ತು ಮಾಟಮಂತ್ರಗಳ ಬಗ್ಗೆ ಮಾಹಿತಿಯನ್ನೊಳಗೊಂಡ ಕೆಲವು ಅಧ್ಯಾಯಗಳೂ ಇವೆ. ಈತ ಸಂಗ್ರಹಿಸಿದ ಅನೇಕ ದಾಖಲೆಗಳು ಕಂಪನಿ ಸರ್ಕಾರ ಬರೆಯಲು ನಿರ್ಧರಿಸಿದ ಭಾರತದ ಇತಿಹಾಸ ರಚನೆಗೆ ಒಳ್ಳೆಯ ಆಕರಗಳಾದವು. ಈ ಗ್ರಂಥ ಸಮಾಜಶಾಸ್ತ್ರ ಅಭ್ಯಾಸಿಗಳಿಗೆ, ಇತಿಹಾಸಕಾರರಿಗೆ ಮತ್ತು ಜಾನಪದ ಅಧ್ಯಯನ ಮಾಡತಕ್ಕವರಿಗೆ ಹೆಚ್ಚು ಉಪಯುಕ್ತವಾಗಿದೆ. ಫ್ರೆಂಚ್ ಭಾಷೆಯಲ್ಲಿದ್ದ ಈ ಗ್ರಂಥದ ಹಸ್ತಪ್ರತಿ 1816ರಲ್ಲಿ ಇಂಗ್ಲಿಷಿಗೆ ಅನುವಾದವಾಯಿತು. ಖ್ಯಾತ ಇತಿಹಾಸಕಾರ ಜೇಮ್ಸ್ ಮಿಲ್ ಮತ್ತು ಕವಿ ಕೋಲ್‍ರಿಜ್ ಅಬ್ಬೆಯ ಕೆಲಸವನ್ನು ಮನಸಾರೆ ಹೊಗಳಿದ್ದಾರೆ.
(ಎಸ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ